ಬ್ಯಾಕ್‍ಸನ್ -
	ಉತ್ತರ ವಿಯೆಟ್‍ನಾಮ್ ಸಮಾಜವಾದಿ ಗಣರಾಜ್ಯದ ರಾಜಧಾನಿಯಾದ ಹಾನಾಯ್ ನಗರದ ಉತ್ತರಕ್ಕಿರುವ ಒಂದು ಪುರಾತತ್ವ ದೇಶ. ಇಲ್ಲಿಯ ಸುಣ್ಣಕಲ್ಲಿನ ಗುಹೆಗಳಲ್ಲಿ ನವಶಿಲಾಯುಗ ಸಂಸ್ಕøತಿಯದೆಂದು ಹೇಳಲಾದ ಕಲ್ಲು, ಮಣ್ಣು ಮತ್ತು ಮೂಳೆಗಳಿಂದ ಮಾಡಿದ ವಸ್ತುಗಳು ದೊರೆತಿವೆ. ಈ ಸಂಸ್ಕøತಿಯನ್ನೇ ಹೋಲುವ ಇಂಡೊಚೀನಾದ ಮತ್ತೊಂದು ಸಂಸ್ಕøತಿಯೆಂದರೆ ಹೋಬಿನಿಯನ್ ಸಂಸ್ಕøತಿ. ಈ ಎರಡು ಸಂಸ್ಕøತಿಗಳನ್ನು ನವಶಿಲಾಯುಗ ಸಂಸ್ಕøತಿಗಳೆಂದು ಅನೇಕರು ಪರಿಗಣಿಸಿದ್ದಾರೆ. ಆದರೆ ಎಷ್ಟರಮಟ್ಟಿಗೆ ಇವು ಈ ಯುಗಕ್ಕೆ ಸಂಬಂಧಿಸಿದ ಅಂಶಗಳನ್ನು ಹೊಂದಿವೆಯೆಂದು ಹೇಳುವುದು ಕಷ್ಟ. ಏಕೆಂದರೆ ಪಶು ಸಾಕಣೆ ಮತ್ತು ವ್ಯವಸಾಯ ಈ ಸಂಸ್ಕøತಿಯ ಜನರಿಗೆ ತಿಳಿದಿದ್ದಂತೆ ತೋರುವುದಿಲ್ಲ. ಇವರ ಶಿಲಾಯುಧಗಳು ಚೆನ್ನಾಗಿ ನುಣುಪು ಮಾಡಿರುವುದಾಗಿಲ್ಲ, ಕೆಲವು ಶಿಲಾಯುಧಗಳನ್ನು ಕೇವಲ ಅಲಗಿನ ಭಾಗದಲ್ಲಿ ಮಾತ್ರ ನುಣುಪಾಗಿಸಿದ್ದರೆ ಮತ್ತೆ ಕೆಲವು ಹೊಳೆಯಲ್ಲಿಯ ನುಣುಪು ಕಲ್ಲಿನಲ್ಲಿ ಚಕ್ಕೆಗಳನ್ನು ತೆಗೆದಂತಿವೆ. ಇಲ್ಲಿ ದೊರೆತಿರುವ ಮಡಕೆಗಳು ಚಕ್ರದ ಸಹಾಯವಿಲ್ಲದೆ ಕೈಯಲ್ಲಿ ಮಾಡಿರುವಂಥವು. ಈ ಎರಡೂ ಸಂಸ್ಕøತಿಗಳ ಗುಂಪನ್ನು ಕೆಲವರು ಪ್ರಾಚೀನ ಶಿಲಾಯುಗದ್ದೆಂದೂ ಮತ್ತೆ ಕೆಲವರು ಮಧ್ಯಶಿಲಾಯುಗದ್ದೆಂದೂ ಕರೆದದ್ದುಂಟು.

	ಬ್ಯಾಕ್‍ಸನ್ ಪ್ರದೇಶದ ಸುತ್ತಮುತ್ತಲ ಅನೇಕ ಸ್ಥಳಗಳಲ್ಲಿ ಹರಡಿದ್ದ ಈ ಸಂಸ್ಕøತಿಯನ್ನು ಬ್ಯಾಕ್‍ಸೋನಿಯನ್ ಸಂಸ್ಕøತಿ ಎಂದೂ ಕರೆಯಲಾಗಿದೆ. ಆ ಎಲ್ಲ ಸ್ಥಳಗಳಲ್ಲಿ ದೊರೆತಿರುವ ಮುಖ್ಯವಾದ ಶಿಲಾಯುಧಗಳೆಂದರೆ ಕೈಕೊಡಲಿಗಳು, ಬಾಚಿಗಳು ಅಂಡಾಕಾರದ ಮತ್ತು ದೀರ್ಘ ಚತುರಸ್ರಾಕಾರದ ಕೈಕೊಡಲಿಗಳು, ಉಳಿಗಳು ಇತ್ಯಾದಿ. ಇವುಗಳ ಲಕ್ಷಣಗಳು ಮೂಲತಃ ಒಂದೇ ಆಗಿದ್ದರೂ ಸಿಕ್ಕಿರುವ ಅವಶೇಷಗಳು ಮಾತ್ರ ವಿಭಿನ್ನ ರೀತಿಯವು. ಕೆಲವು ಸ್ಥಳಗಳಲ್ಲಿ ಕೇವಲ ಶಿಲಾಯುಧಗಳು ಮಾತ್ರ ದೊರೆತಿದ್ದರೆ ಮತ್ತೆ ಕೆಲವೆಡೆ ಮಡಕೆಯ ಚೂರುಗಳು, ಮಣ್ಣಿನ ಬಳೆಚೂರುಗಳು, ಮೂಳೆ ಮತ್ತು ಅದರ ಉಪಕರಣಗಳು ಇತ್ಯಾದಿ ದೊರೆತಿವೆ. ಇದರಿಂದಾಗಿ ಇವರೆಲ್ಲರೂ ಒಂದೇ ಸಂಸ್ಕøತಿಯ ಪಂಗಡಕ್ಕೆ ಸೇರಿದವರಾದರೂ ಬೇರೆ ಬೇರೆ ಸ್ಥಳವಾಸಿಗಳ ಜೀವನಕ್ರಮ ಆರ್ಥಿಕಸ್ಥಿತಿಗತಿಗಳು ವಿವಿಧ ರೀತಿಯದಾಗಿದ್ದವೆಂದು ಹೇಳಲಾಗಿದೆ. ಇಲ್ಲಿಯ ಮಣ್ಣಿನ ಮಡಕೆ ಮತ್ತು ವಸ್ತುಗಳೆಲ್ಲವೂ ಒಂದೇ ಮಾದರಿಯವಾಗಿದ್ದು ಅವನ್ನು ಕೈಯಿಂದಲೇ ಮಾಡಲಾಗಿದೆ. ಅವುಗಳ ಮೇಲೆ ಗೆರೆಗಳ ಮತ್ತು ದಾರದ ರೀತಿಯ ಸರಳವಾದ ಅಲಂಕರಣವಿದೆ. ಮೂಳೆಯ ಆಯುಧಗಳಲ್ಲಿ ನಾಚೆ ಎಂಬಲ್ಲಿ ದೊರೆತಿರುವ ದೀರ್ಘ ಚತುರಸ್ರಾಕಾರದ ಒಂದು ಮೂಳೆಯ ಕೊಡಲಿ ಗಮನಾರ್ಹವಾದುದು. ಈ ಸಂಸ್ಕøತಿಯ ವಿಭಿನ್ನ ಅವಶೇಷಗಳ ಸ್ಥೂಲ ಅಧ್ಯಯನದಿಂದ ಇಲ್ಲಿಯ ಮಂದಿ ಪ್ರಾಯಶಃ ಮುಂಚಿನ ಆಸ್ಟ್ರೋಲಾಯಿಡ್ ಮತ್ತು ಮೆಲನಾಯಿಡ್ ಜನಾಂಗದವರಿರಬೇಕೆಂದು ಉಹಿಸಲಾಗಿದೆ. ಇವರ ಮುಖ್ಯ ಕಸಬು ಬೇಟೆ ಮೀನುಗಾರಿಕೆ ಪ್ರಾರಂಭಾವಸ್ಥೆಯ ಅಥವಾ ಮೂಲರೂಪದ ವ್ಯವಸಾಯ ಮತ್ತು ಪಶುಸಾಕಣೆಯಾಗಿದ್ದು ಇವರು ಬಾಳೆಹಣ್ಣು, ಯ್ಯಾಮ್ ಎಂಬ ರೀತಿಯ ಗೆಡ್ಡೆ ಗೆಣಸು ಇತ್ಯಾದಿಗಳನ್ನು ಬೆಳೆಸುತ್ತಿದ್ದರೆಂದೂ ಹಂದಿ, ಬಾತುಕೋಳಿ. ನಾಯಿ ಇತ್ಯಾದಿಗಳನ್ನು ಸಾಕುತ್ತಿದ್ದರೆಂದೂ ಊಹಿಸಲಾಗಿದೆ.
(ಎಂ.ಎಸ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ